ಜಾತಿ - ನಾ ಅರಿತಂತೆ - ಭಾಗ ೧

ಆಗ ನನಗೆ ವಯಸ್ಸು ೫. ದಿನ ನಿತ್ಯದಂತೆ ಎದ್ದು ಆಡಲಿಕ್ಕೆ ನಾನು ತಯಾರ್ ಆಗ್ತಾ ಇದ್ದೆ. ಅಷ್ಟ್ರಲ್ಲಿ - ಅವ್ವಾ ಬಾಬಾ ಗೆ ಹೇಳಿದ ಮಾತು ನನ್ನ ಕಿವಿಗೆ ಬಿತ್ತು - "ರೀ - ಇವತ್ತು ಸರ್ಕಾರಿ ಸಾಲ್ಯಾಗ, admissions ಶುರು ಆಗ್ಯಾವ. ಹೋಗಿ ಮಯ್ಯಾ ನ ಸೇರಸ ರೀ". ಅದು ನನ್ನ ಜೀವನದ ಶಾಲೆಯ ಮೊದಲ ದಿನ ವಾಗಿತ್ತು. ನಾನು ಅಂಗಿ ಚೊಣ್ಣ ತೊಟ್ಟು - ಎರಡು ದಿನ ಹಿಂದೆ ತಂದಿದ್ದ ಒಂದು ಪಾಟಿ ಚೀಲ, ಹೆಗಲಿಗೆ ಹಾಕಿ ಬಾಬಾನ್ ಕೈ ಹಿಡಿದು ಹೊರಟೆ. ಬಾಬಾ ಸರ್ಕಾರಿ ಆಫೀಸ್ ಅಲ್ಲಿ ಕೆಲಸ ಮಾಡುವ ವ್ಯಕ್ತಿ. ಯಾವದೋ ಪಕ್ಕದಲ್ಲಿ ಇರೋ ಹಳ್ಳಿಗೆ ಸೈಟ್ ಕೆಲಸದ ಮೇಲೆ ಹೋಗುವ ಗಡಿಬಿಡಿ. ಬೇಗ admission ಮಾಡಿ ಹೋಗೋಣ ಅಂತ ಬಂದ್ರು. ಅವರದು ಎತ್ತರವಾದ ಶರೀರ ; ನಡೆಯವುದು ವೇಗ; ನಾನು ನನ್ನ ಪುಟ್ಟ ಹೆಜ್ಜೆಗಳನ್ನೇ ದಾಪುಗಲಿನಂತೆ ಇಟ್ಟು ನಡೆದೆ; ಒಂದು ಕೈ ಬಾಬಾನ ಕೈ ಹಿಡಿದರೆ ಇನ್ನೊಂದು ನನ್ನ ಸೋರುತ್ತಿದ್ದ ಮೂಗು ಮತ್ತು ಜಾರುತ್ತಿದ್ದ ಚೊಣ್ಣ ಸರಿ ಮಾಡುವದರಲ್ಲಿ ತೊಡಗಿತ್ತು.

ನಾವು ವಾಸಿಸುವ ಮನೆಯಿಂದ ಕೆಲವೇ ಹೆಜ್ಜೆ ಆ ಶಾಲೆ. ನಾನು ಎಂದು ಅಲ್ಲಿ ಹೋಗಿರಲಿಲ್ಲ. ಬಾಬಾ ಮತ್ತು ನಾನು ಮೊದಲ ಹೆಜ್ಜೆ ಇಟ್ಟಿದ್ದು - ಸರಸ್ವತಿಯ ಮಡಿಲಾದ ಮುಪ್ಪಯ್ಯನ್ ಮಠ ದಲ್ಲಿ. ಮುಪ್ಪಯ್ಯನ್ ಮಠ - ಗೋಕಾಕ್ ನಗರದ ಕನ್ನಡ ಗಂಡು ಮಕ್ಕಳ ಶಾಲೆ - ನೋ ೨ ಕ್ಕೆ ಒಂದು ವಾಸ ಸ್ಥಳವಾಗಿತ್ತು. ನನ್ನಂತೆ ಅನೇಕ ಹುಡುಗರು ಶಾಲೆಗೆ ತಮ್ಮ ತಂದೆ-ತಾಯಿಯರ್ ಜೊತೆ ಸರದಿಯಲ್ಲಿ ಬಂದು ನಿಂತಿದ್ರು. ನನಗೇನೋ ಅದು ಕುಶಿ. ಇದು ಹೊಸ ಜಾತ್ರೆ ತರಹ ಕಂಡಿತ್ತು. ಕೆಲವರು ಅಳ್ತಾ ಇದ್ದರೆ ಇನ್ನು ಕೆಲವರು ಬೇಗ ಮನೆಗೆ ಹೋಗೋಣ ಅಂತ ಕಾಯ್ತಾ ಇದ್ರೂ. ಸರದಿಯಲ್ಲಿ ನಾನು ಬಾಬಾನ್ ಜೊತೆ ನಿಂತಿದ್ದೆ. ಸೇರ್ಪಡೆ ಒಂದು ತುಂಬಾ ಸರಳವಾದ ವಿಧಾನ ವಾಗಿತ್ತು. ಅಲ್ಲಿ ಕುಳಿತ್ತಿದ್ದ ಟೀಚರ್ (ಪಾಟಿಲ್ ಟೀಚರ್) ಕೇಳಿದ್ದು ಕೆಲವೇ ವಿವರ : ಹೆಸರು, ತಂದೆಯ ಹೆಸರು, ಹುಟ್ಟಿದ ದಿನಾಂಕ, ಜಾತಿ. ಮೊದಲ ಎರಡು ತುಂಬಾ ಸರಳವಾಗಿದ್ದು ನಾನೇ ಹೇಳಿದೆ - "ಹೆಸರು - ಮಹೇಶ್ ವಿಠಲ ಘಾಟಗೆ" ; "ತಂದೆಯ ಹೆಸರು - ವಿಠಲ್ ರಾವಸಾಹೇಬ್ ಘಾಟಗೆ" ; ಮತ್ತೆ.. ಹುಟ್ಟಿದ ದಿನಾಂಕ , ಜಾತಿ ...ತೋಚಲಿಲ್ಲ. ಆಮೇಲೆ ನಾನು ಮುಖ ಸಪ್ಪ ಮಾಡಿ ; ತಲೆ ಎತ್ತಿ ಬಾಬಾನ್ ನೋಡಿದೆ. ಅವರಿಗೆ ನನ್ನ ಕಷ್ಟ ಅರಿವಾಗಿ ನಗ್ತಾ, ನನ್ನ ಹುಟ್ಟಿದ ದಿನಾಂಕ - "೦೫ ಸೆಪ್ಟೆಂಬರ್ ೧೯೮೧" ; ಜಾತಿ - "ಹಿಂದೂ ಮರಾಠ" ಅಂತ ಹೇಳಿದ್ರು. ಅದೇ ಮೊದಲ ಬಾರಿ ನಾನು ನನ್ನ ಹುಟ್ಟಿದ ದಿನಾಂಕ ಮತ್ತು ಜಾತಿ ಅರಿತಿದ್ದು. ಅಷ್ಟ್ರಲ್ಲಿ, ಬಾಬಾ ನನ್ನನ್ನು ಶಾಲೆಯಲ್ಲಿ ಬಿಟ್ಟು "ಸಾಲಿ ಮುಗದ ಮ್ಯಾಲ ನೆಟ್ಟಾಗ ಮನೆಗೆ ಹೋಗು. ಹಿಂದಿನ ರಸ್ತಾದಾಗ ನಮ್ಮ ಮನಿ" ಅಂತ ಹೇಳಿ ನನ್ನ ಜೇಬಿನಲ್ಲಿ ನಾಲ್ಕಾಣೆ ಇಟ್ಟರು. ನಾನು ಆ ನಾಲ್ಕಾಣೆ ನನ್ನ ಎದೆಗೆ ಒತ್ತಿ ಹಿಡಿದು ಜಾಗರೂಕ್ ನಾಗಿ ಅಲ್ಲೇ ಕುಳಿತೆ. ಸುತ್ತ ಮುತ್ತ ಹೊಸ ಮುಖಗಳು ; ಕೆಲವರು ಮುಖ ಬಿಗಿಯಾಗಿ ಹಿಡಿದು ಕೂತಿದ್ದು ; ಇನ್ನು ಕೆಲವರು ಅಳ್ತಾ ಇದ್ರೂ, ನಾನು ಎಲ್ಲೆಡೆ ಕಣ್ಣ ಹರಡಿಸಿ ನೋಡ್ತಾ ಇದ್ದೆ. ಶಾಲೆ ಒಂದು ಹೆಂಚಿನ ಮನೆಯಾಗಿತ್ತು; ಕಳೆದ ದಿನವೇ ಸೇಗುನಿಯಿಂದ ಸಾರಿಸಿದ್ದು ಅಂತ ನನ್ನ ಮೂಗು ಆ ವಾಸನೆ ಇಂದ ಹೇಳಿತು.

ಇನ್ನು admissions ನಡೀತಾ ಇತ್ತು. ನಾನು ಸರದಿಯಲ್ಲಿ ಬರುವ ಪ್ರತಿ ಹುಡುಗರ ಹೆಸರು ಕೇಳ್ತಾ ಇದ್ದೆ.ನನಗೆ ಬಾರದ ಪ್ರಶ್ನೆಗಳ ಉತ್ತರ ಇವರು ಬಲ್ಲರಾ ಎಂದು ಆಗುಂತಕನಾಗಿ ನಾನು ಆಲಿಸುತ್ತ ಇದ್ದೆ. ಮೊದಲ ಬಾರಿ ನನ್ನ ಕಿವಿಗೆ ಬಿದ್ದ ಶಬ್ದ - "ಹಿಂದೂ ಮರಾಠ" ಒಂದು ಹೊಸ ಲೋಕ ಅನಿಸಿತ್ತು. ಅಸ್ಟರಲ್ಲಿ ಇನ್ನೊಬ್ಬ ಹುಡುಗ ಪಕ್ಕದಲ್ಲಿ ಬಂದು ಕುಳಿತ - ಅವನ ಹೆಸರು - "ಮಹೇಶ್" !! ಪೂರ್ಣ ಹೆಸರು "ಮಹೇಶ್ ಶಂಕರ್ ಹಂದಿಗುಂದ" . ಅವನು ನಮ್ಮ ಓಣಿಯಲ್ಲಿ ವಾಸ್ ವಾಗಿದ್ದರೂ ನಮ್ಮ ಭೇಟಿ ಇದೆ ಮೊದಲು. ಅವನು ಸ್ವಲ್ಪ ಧ್ರಢವಾಗಿ, ನೇರವಾಗಿ ಕುಳಿತು ಬೋರ್ಡ್ ನೋಡ್ತಾ ಇದ್ದ. ಹಣೆಯ ಮೇಲೆ ವಿಭೂತಿ ಇತ್ತು. ಅಷ್ಟ್ರಲ್ಲಿ ಅಲ್ಲಿ ಇದ್ದ ಕೆಲ ತಂದೆ-ತಾಯಿಯರಿಗೆ ಹೊರಗಡೆ ಹೋಗಲು ಹೇಳಿ ಟೀಚರ್ ನಮ್ಮ ಮೊದಲ ಕ್ಲಾಸ್ ಫ್ರಾರಂಭ ಮಾಡಿದ್ರು. ನಮ್ಮನೆಲ್ಲ ಸಂಭಾಳಿ ಸುವದರಲ್ಲಿ ಕ್ಲಾಸ್ ಸಮಯ ಮುಗಿದಿತ್ತು. ಬಟ್ಟೆ ತರಲು ಹೋಗುತ್ತಿದ್ದ ಅಂಗಡಿಯ ಹುಡುಗ ಚೋಟೆ - "ಅಸ್ಲಂ ಪಠಾಣ" ಕೂಡ ಪರಿಚಯ ಮುಖವಗಿತ್ತು. ಕಾಯಿ ಪಲ್ಯ ಅಂಗಡಿಯ "ಜ್ಯೋತಿಬಾ ಸಾಳುಂಕೆ" ಕೂಡ "ಹಿಂದೂ ಮರಾಠ" ಅಂತ ಬರೆಸಿದ್ದು ಜ್ಞಾಪಕ ಉಂಟು.

ಶಾಲೆ ಘಂಟೆ ಬಾರಿಸಿದ್ದೆ ತಡ ನಾನು ಓಡಿದ್ದು ಮನೆಗೆ. ಅವ್ವ ಕೇಳಿದ್ದು - "ಏನ್ ಮಾಡಿದಿ ಇವತ್ತ ಸಾಲ್ಯಾಗ ?" ನಾನು ಹೇಳಿದೆ - "ನನ್ನ ಹೆಸರು, ಬಾಬನ ಹೆಸರು ಬರಕೊಂದ್ರ; ಆಮೇಲೆ ಬೋರ್ಡ್ ಮ್ಯಾಲ ಅಕ್ಷರ ಮಾಲೆ ಅಂತ ಬರಿದ್ರೋಳಗ ಸಾಲಿ ಮುಗಿತು". ಆಮೇಲೆ ಶುರುವಾಗಿದ್ದು ನನ್ನ ಪ್ರಶ್ನೆ . "ಅವ್ವ - ನಾವು ಹಿಂದೂ ಮರಾಠ ಅಂತ ಬರಿಸಿದಿವಿ. ಹಂಗ ಅಂದ್ರ ಏನು ?" ಅಡುಗೆ ಮನೆಯಲ್ಲಿ - ತಾಯಿ ಜೊತೆ ನನ್ನ ಪಾಠ ಇದೆ ರೀತಿ ಪ್ರಾರಂಭ ಆಯಿತು. ಅವ್ವ ಹೇಳಿದ್ದು - "ಹಳಿ ಕಾಲದಾಗ ಛತ್ರಪತಿ ಶಿವಾಜಿ ಅಂತ ರಾಜ ಇದ್ರು. ಬಹಳ ಶಕ್ತಿ ಶಾಲಿ, ಪ್ರಭಾವ ಶಾಲಿ, ಬುದ್ದಿವಂತರು. ಅವರು ತಾಯಿ ಜೀಜಾ ಮಾತೆ. ಹಿಂದೂ ಸಮಾಜಗೊಸ್ಕರ್ ಹೋರಾಡಿದರು". ನನ್ನ ಕಿವಿಗೆ ಬಿದ್ದಿದು ರಾಜ ಮಾತ್ರ ; ಅವಾಗ ನಾನು ಅಲ್ಲೇ ಪಡುಸಾಲೆಯಲ್ಲಿ ಇದ್ದ "ಕುದುರೆ ಮೇಲೆ ಕುಳಿತಿರೋ ಶಿವಾಜಿ ಚಿತ್ರ" ನೋಡಿ ಹುಮ್ಮಸ್ಸಿನಿಂದ ನುಡಿದಿದ್ದು "ನಾನು ಕುದುರೆ ಮೇಲೆ ಕುಲಿತ್ಕೋ ಬೇಕು."

ಆದರೂ "ಹಿಂದೂ ಮರಾಠ" ಎಂಬ ಈ ಪದ ನಾನು ಶಾಲೆಯಲ್ಲಿ ಕೇಳಿದ "ಹಿಂದೂ ಲಿಂಗಾಯತ", "ಮುಸ್ಲಿಂ ಸುನ್ನಿ" ಗಿಂತ ಭಿನ್ನವಾಗಿ ಭಾಸವಾಗಿತ್ತು. ಮುಂಬರುವ ದಿನಗಳಲ್ಲಿ ಅದರ ವಿಭಿನ್ನತೆ ಅರಿವಾಗುವುದು ಎಂದು ನಾನು ತಿಳದಿರಲಿಲ್ಲ. ಆ ದಿನ ಆ ಕ್ಷಣದ ವರೆಗೂ ಈ ಮುಂಚೆ ಎಂದೂ ನನ್ನ ತಂದೆಯಾಗಲಿ ತಾಯಿಯಾಗಲಿ ಜಾತಿ-ಮತ ಭೇಧದ ಬಗ್ಗೆ ಪ್ರಸ್ತಾಪಿಸಿರಲಿಲ್ಲ ; ಜಾತಿಯ ಬೀಜ ಬಿತ್ತಿದ್ದು ಶಾಲೆಯಲ್ಲಿ ಅನ್ನೋದೂ ಎಂಥಾ ವಿಪರ್ಯಾಸ !!

Comments

  1. I read all your blogs! :) Very nice! Very good language :)
    Very fine expression! :)

    ReplyDelete

Post a Comment

Popular posts from this blog

ನಿಜ ಜೀವನದಲ್ಲಿ ಹಾಸ್ಯ : ಕಂಪನಿಯ ಹೆಸರಿನ ಗೊಂದಲ

ಅಂದಿನ ಚುಟುಕುಗಳ ಓಟ

ಮನದ ಅರಸಿ