ಆಗ ನನಗೆ ವಯಸ್ಸು ೫. ದಿನ ನಿತ್ಯದಂತೆ ಎದ್ದು ಆಡಲಿಕ್ಕೆ ನಾನು ತಯಾರ್ ಆಗ್ತಾ ಇದ್ದೆ. ಅಷ್ಟ್ರಲ್ಲಿ - ಅವ್ವಾ ಬಾಬಾ ಗೆ ಹೇಳಿದ ಮಾತು ನನ್ನ ಕಿವಿಗೆ ಬಿತ್ತು - "ರೀ - ಇವತ್ತು ಸರ್ಕಾರಿ ಸಾಲ್ಯಾಗ, admissions ಶುರು ಆಗ್ಯಾವ. ಹೋಗಿ ಮಯ್ಯಾ ನ ಸೇರಸ ರೀ". ಅದು ನನ್ನ ಜೀವನದ ಶಾಲೆಯ ಮೊದಲ ದಿನ ವಾಗಿತ್ತು. ನಾನು ಅಂಗಿ ಚೊಣ್ಣ ತೊಟ್ಟು - ಎರಡು ದಿನ ಹಿಂದೆ ತಂದಿದ್ದ ಒಂದು ಪಾಟಿ ಚೀಲ, ಹೆಗಲಿಗೆ ಹಾಕಿ ಬಾಬಾನ್ ಕೈ ಹಿಡಿದು ಹೊರಟೆ. ಬಾಬಾ ಸರ್ಕಾರಿ ಆಫೀಸ್ ಅಲ್ಲಿ ಕೆಲಸ ಮಾಡುವ ವ್ಯಕ್ತಿ. ಯಾವದೋ ಪಕ್ಕದಲ್ಲಿ ಇರೋ ಹಳ್ಳಿಗೆ ಸೈಟ್ ಕೆಲಸದ ಮೇಲೆ ಹೋಗುವ ಗಡಿಬಿಡಿ. ಬೇಗ admission ಮಾಡಿ ಹೋಗೋಣ ಅಂತ ಬಂದ್ರು. ಅವರದು ಎತ್ತರವಾದ ಶರೀರ ; ನಡೆಯವುದು ವೇಗ; ನಾನು ನನ್ನ ಪುಟ್ಟ ಹೆಜ್ಜೆಗಳನ್ನೇ ದಾಪುಗಲಿನಂತೆ ಇಟ್ಟು ನಡೆದೆ; ಒಂದು ಕೈ ಬಾಬಾನ ಕೈ ಹಿಡಿದರೆ ಇನ್ನೊಂದು ನನ್ನ ಸೋರುತ್ತಿದ್ದ ಮೂಗು ಮತ್ತು ಜಾರುತ್ತಿದ್ದ ಚೊಣ್ಣ ಸರಿ ಮಾಡುವದರಲ್ಲಿ ತೊಡಗಿತ್ತು. ನಾವು ವಾಸಿಸುವ ಮನೆಯಿಂದ ಕೆಲವೇ ಹೆಜ್ಜೆ ಆ ಶಾಲೆ. ನಾನು ಎಂದು ಅಲ್ಲಿ ಹೋಗಿರಲಿಲ್ಲ. ಬಾಬಾ ಮತ್ತು ನಾನು ಮೊದಲ ಹೆಜ್ಜೆ ಇಟ್ಟಿದ್ದು - ಸರಸ್ವತಿಯ ಮಡಿಲಾದ ಮುಪ್ಪಯ್ಯನ್ ಮಠ ದಲ್ಲಿ. ಮುಪ್ಪಯ್ಯನ್ ಮಠ - ಗೋಕಾಕ್ ನಗರದ ಕನ್ನಡ ಗಂಡು ಮಕ್ಕಳ ಶಾಲೆ - ನೋ ೨ ಕ್ಕೆ ಒಂದು ವಾಸ ಸ್ಥಳವಾಗಿತ್ತು. ನನ್ನಂತೆ ಅನೇಕ ಹುಡುಗರು ಶಾಲೆಗೆ ತಮ್ಮ ತಂದೆ-ತಾಯಿಯರ್ ಜೊತೆ ಸರದಿಯಲ್ಲಿ ಬಂದು...